ಜಗವನು ನೋಡಲುಭರದಲಿ ಬಂದನುಮಂಗಳ ಲೋಕದದೂಕನುತಾನೂ|
ಜಗದಲಿ ಮನುಜರನಡುವಳಿ ನೋಡಲು ಭೊಮಿಗೆತಾನಿಳಿದೂ||
ಜಗದೊಳು ಕಾನನಸಿರಿ ಹಾಳಾದುದ ನೋಡಲು ಕರಗಿತು ಮನವಾದೂತನ |
ಜಗದೊಳ ಗಣಜನ ಕಾನನ ಬೆಳಿಸದೆಗೆಡೆಹಿಹ ಹಾಳದನೆನ್ನುತಲಿ || ೧ ||
ಮುಂದೆ ನಡೆಯುತವ ಹೊಲದೋಟಂಗಳ ನೋಡಿದ ಬೆಳೆನಿಸ್ತೇಜಗಳಾ |
ತಂದೆ ಜಗತ್ಪತಿ ಕೊಟ್ಟಿರೆ ಮಳೆ ಹೊಳೆ ಸರಗಳ ನೀಜನರೂ ||
ಚಂದದಿಂದೆ ಶ್ರಮವಹಿಸುತೆ ಕಾಲುವೆ ಕಡಿಯುತೆ ಹೊಲನೀರ್ಗುಡಿಸದಲೆ|
ಅಂದಗೆಡಹುತೆ ಬೀಳ್ಗೆಡಹಿಹರೌ ಅಂಧರು ಮಾನವರು || ೨ ||
ಇಂತು ಮನದೊಳೆ ಚಿಂತಿಸಿನಡೆದೆನು ಹಳ್ಳಿಯಜನಗಳ ನೋಡ್ವವುದಕೇ |
ಸಂತೆಯಂತೆ ಜನ ನೆರೆದುದ ಕಂಡನು ಚಹದಂಗಡಿಗಳ ಚಪ್ಪರದಿ ||
ಎಂತು ಹೊಲಗಳಲಿ ದುಡಿಯುವರೀಜನರಿಂತು ದುರ್ವೆಸನ ಮಾಡುತಿರೆ |
ಇಂತು ಚಿಂತಿಸುತೆ ಮನದೊಳು ಮರುಗಿದೆ ಶಿವಶಿವನೆನ್ನುತ್ತೆ || ೩ ||
ಮನೆ ಮನೆತಿರುಗಿದ ತಾನೊಕ್ಕಲಿಗರ ದನಕರು ಧಾನ್ಯದ ಕಣಜಗಳಾ।
ಸನಿಹದಲಿರುವ ತಿಪ್ಪೆಯ ಕುಂಡಿಯ ನೋಡಲು ಬಯಸುತ್ತೇ ||
ಮನೆಗೋದಲಿಯೊಳು ಚಿಪ್ಪಡಿ ಮೇಯುವ ಬಸವನ ಕಂಡನು ಆದೂತ |
ಎನಿತೀಪರಿ ನೀಂ ಬಿಡುತಲಿ ಸಗ್ಗವ ಬಾಳುವೆ ಜಗದೊಳಗೆ || ೪ ||
ಇಂತು ಹೊಟ್ಟು ದಾಣಿಗಳನು ತಿನ್ನದೆ ಸೊರಗುತೆ ಬಳಕುಕೆ ಬೀಳುತ್ತೆ |
ಎಂತು ಹೊಲಗಳಲಿ ದುಡಿಯುವೆ ನಿರ್ಘ್ರಣಮನುಜರ ಸಲುವಾಗಿ ||
ಕಂತೆ ಮುಗಿದಿದು ನಿನ್ನೀಜಗದೊಳು ಇಂತುದುರ್ದಶೆಯ ಪಡೆದಿರೆ ನೀ|
ಚಿಂತಿಸಿಕೊರಗಿದ ಮನದೊಳೆ ಮರಗುತೆ ಭ್ರಾಂತಿಯಗೊಳ್ಳುತಲಿ || ೫ ||
ಹಸುಗಳ ನೀಕ್ಷಿಸೆ ಗೋದಲಿಯೋಳು ತಾ ನಡೆದನು ಬಸವನ ಮಾತೆಯರ |
ಕೃಷೆಯಾಗುತಲವು ಧಾರೆಗಳಲ್ಲದೆ ಶಿಶುಗಳ ಬಳಕಿಸುತೆ ||
ತುಸುಹಾಲನು ಮನೆಯೊಡತಿಯು ಹಿಂಡುತೆ ಮಾರುವಳಾಚಣದೀ |
ಹೊಸರೊಕ್ಕವ ತಾ ಗಳಿಸಲು ಹಾಲನು ಗೋಳಿಸಿ ಹಸುಗಳನೂ || ೬ ||
ಕಾಳಿನ ಕಣವ ನೋಡಲು ಪೋದನು ಕಾಳಿಲ್ಲದಲಿಲಿ ಹೆಗ್ಗಣವು |
ಮೇಳಿಸಿ ತಾಂಡವ ನಡಿಸಿರೆ ಅತ್ತನು ಗೋಳನು ರೈತರ ಸ್ಮರಿಸುತಲಿ ||
ಕಾಳುಗಳೆಲ್ಲಿಂ ಪಡೆಯುವೆ ತಿನ್ನಲು ರೇಶನ್ ದಾರಿಯೆ ತನಗೆಂದೂ |
ಗೋಳಿಟ್ಟತ್ತನು ದುಃಖದಿರೈತನು ಹಾಳೆನ್ನಯ ಬಾಳೆನ್ನುತಲಿ || ೭ ||
ಬಾಳನು ನಮ್ಮಯ ಸುಖಮಯ ಮಾಡಲು ದುಡಿದನು ಗಾಂಧಿಯು ನಮ್ಮಪ್ಪ |
ಖೂಳನು ಸಹಿಸದೆ ಕೊಂದನು ಗಾಂಧಿಯ ನಾವಾಗಿರುವೆವು ಪರದೇಶಿ ||
ಆಳುವ ಜನಗಳು ನಮ್ಮರು ಇರ್ದೊಡೆ ಸ್ವಾರ್ಥದಿ ಕೆಲಜನ ಪೀಡಿಪರೂ |
ಗೋಳುಗಳೆಲ್ಲವು ಬೆಳೆದಿವೆ ಗಾಂಧಿಯು ನಮ್ಮಯ ಮಧ್ಯದಿತಾಪೋಗೆ || ೮ ||
ಇಲ್ಲದಾಸೆಗಳ ಹಚ್ಚುತ ಬರುವರು ಧೂರ್ತರು ಹೋಟನು ಪಡೆವುದಕೆ |
ಎಲ್ಲ ಹೋಟುಗಳನೆತ್ವರು ಮೋಸದಿ ತಮ್ಮಯ ದುಡ್ಡಿನ ಬಲದಿಂದೆ ||
ಮೆಲ್ಲ ಮೆಲನೆ ವಚನವ ಮುರಿಯುತೆ ಸೊಕ್ಕಿಲಿ ಮೆರೆವರು ಸಭೆಗಳಲಿ |
ಇಲ್ಲಿ ಜನಗಳು ಪಡುತಿಹಗೋಳನು ತಿಳಿಯದಲೆಂದೆಂದೂ || ೯ ||
ನಮ್ಮ ರಾಜ್ಯವನು ನಾವಾಳುತಲಿಕೆ ನಮ್ಮದು ಸುಖವದು ತಾನಿರದು |
ನಮ್ಮನಮ್ಮೊಳು ನಾಡೊಳು ನಡದಿದೆ ಕಲಹವು ಯೆಲ್ಲೆಡೆಗೂ ||
ನಮ್ಮ ನಾಡಿದು ಹೆಮ್ಮಿಲಿ ಮೆರೆವಾ ದಾರಿಯ ತೋರ್ಪುದು ಕರುಣದಲಿ |
ನಮ್ಮನಿಮ್ಮಗಳ ಜಗದೊಡೆಯನು ವೊಬ್ಬನೆ ಸಿರಿಹರಿ ಭಗವಂತಾ || ೧೦ ||
ಸಹಕಾರಕದ ಸಂಘವ ನಿರ್ಮಿಸಿ ಹೊಲಗೂಡಿಸುತೆ ಬೆಳೆಯಿರಿ ಪೈರಾ |
ಮಹಜನ ಸಂಘದಿ ಪೊಳೆವುದು ತೇಜವು ಸುತ್ತಲು ಜಗದೊಳಗೇ ||
ಸಹಕರಿಸುತೆ ನೀವ್ಕೂಡುತೆ ದುಡಿಯಲು ಬಂಧುಗೆಳೆಲ್ಲರು ಒಮ್ಮನದಿ |
ಸಹಕರಿಸುವನವ ಮುರಹರಿ ನಿಮ್ಮೊಳು ಶಾಶ್ಚತ ಸುಖಗಳ ನೀಡುತ್ತೆ || ೧೧ ||
ಹಳ್ಳಿಯ ಉದ್ದಿಮೆಗಳ ನೀವ್ಬೆಳೆಯಿಸಿಕೊಳ್ಳುತೆ ಬಾಳಿರಿವುಳ್ಳದರೋಳ್ |
ಸುಳ್ಳರು ಕಳ್ಳರುಯೆನ್ನಿಸಿಕೊಳ್ಳದೆ ಸಜ್ಜನರೆಂಬಭಿಧಾನವ ಗಳಸಿರಿ ||
ತಿಳ್ಳಿಆಟದಲಿ ನಿಪುಣರು ನಿಮ್ಮೆಡೆಬಂದೊಡೆ ಮತಗಳ ಬೇಡ್ವುದಕೆ |
ತಳ್ಳಿ ಹಾಕುತಲಿ ನಿಮ್ಮೊಳು ವಳ್ಳೆಯ ರೈತನ ಕಳುಹಿರಿ ಪ್ರತಿನಿಧಿಯ || ೧೨ ||
ದಿಲ್ಲಿಯಲಿರ್ಪ ನಿಮ್ಮಯಹಿರಿಯರು ಚಿಂತಿಸುತಲಿರ್ಪರು ನಿಮ್ಮಯ ಹಿತವ |
ಅಲ್ಲಿಗೆ ತಿಳುಹಲು ನಿಮ್ಮಯ ಗೋಳನು ಧಾವಿಸಿ ಬರುವರು ಸಾಂತ್ವನಕೆ |
ಗುಲ್ಲನೆಬ್ಬಿಸುವ ಧೂರ್ತರ ತ್ಯಜಿಸುತೆ ನಂಬಿರಿ ನಿಮ್ಮಯ ನಾಯಕರ |
ಎಲ್ಲಸೌಖ್ಯಗಳನೊದಗಿಸೆ ನಾಯ್ಕರು ದುಡಿವರು ನಿಮ್ಮಯ ಸಲುವಾಗೀ ||೧೩||
ಮೂಢನಂಬುಗೆಗಳೆಲ್ಲನು ಬಿಸುಟುತೆ ಮಾಡಿರಿ ಸುಖಮಯ ಬಾಳುವೆಯಾ |
ಮಾಡುತೆ ಕಾಯಕ ಮಡಿಯಿರಿ ತೋಷದಿ ನಿಮ್ಮಯ ನಾಡಿನ ಸಲುವಾಗಿ ||
ದೂಡಿರಿ ಜಾತಿವಿಜಾತಿಯ ಜಗಳವ ಕೂಡುತೆ ನಾಡಿಗರೆಲ್ಲರು ನೀವು |
ಮಾಡಿರಿ ಬಿಚ್ಚೆಯ ಪ್ರಸರಣೆಯೆಲ್ಲೆಡೆ ಬೆಳಗಿರಿ ಜ್ಞಾನದ ಜ್ಯೋಯೋತಿಯನೂ ||೧೪||
ಇಂತು ದೂತತಾ ರೈತನ-ಸಾಂತ್ವನಗೊಳಿಸುತೆ ನಡೆದನು ಶಹರಕ್ಕೇ |
ನಿಂತು ನೋಡಿದನು ಧೂರ್ತರು ಮುರಿವುದ ಬಡವರ ಕತ್ತುಗಳಾ ||
ಎಂತು ಮಾನವರು ನೀತಿಯಬಿಡುತಲಿ ಮಾಡುತಲಿಹಕಾ ಸಂತೆಯಕಪ್ಪನು |
ಕಂತುಪಿತನೆ ನೀಂ ಶಾಶನಗೈಯ್ಯದೆ ಸುಮ್ಮನೇ ಕುಂತಿರುವೀ ||೧೫||
ನಗರನಾಯಕನು ದೂತನ ಕಾಣಲು ಗಡಬಿಡಿಸುತಲವ ತಾ ಬಂದಾ |
ನಗರ ನಮ್ಮದಿದು ಸಂಪದ್ವೈಭವದಿಂದತಿ ಮೆರೆಯುವದು ||
ನಗರವಾಸಿಗಳು ಧನವನು ಗಳಿಸುತೆ ಮೆರೆವರು ಸಂತತ ಭೋಗದಲೀ |
ಜಗಳವಾಡುವರು ತಮ್ಮೊಳು ಸ್ವಾರ್ಥದಿವಿದ್ಯೆಯ ಕಲಿತವರು ||೧೬||
ದೂತಕೇಳುತಲಿ ನಗರಾಧ್ಯಕ್ಷನ ಮಾತಿಗೆ ಪಡಿನುಡಿದಾ |
ನೀತಿಬಿಟ್ಟಿಹರು ಯೆಲ್ಲೆಡೆ ಜನಗಳು ನಿಮ್ಮೀಲೊಕದೊಳೂ ||
ನೀತಿರಹಿತಧನ ಮಾನಂಗಳ ಪಡೆಯಲು ಸಂತತ ಹೆಣಗುವರೂ |
ಕೋತಿಯಂದದಿಂ ಕುಣಿವರು ಹುದ್ದೆಯು ತಾ ಬರೆಮಾನವರು || ೧೭ ||
ನೀತಿ ತತ್ವಗಳ ಕಲಿಸಿರಿ ನಿಮ್ಮಯ ಪಾಠ ಶಾಲೆಯ ಬಾಲರಿಗೇ |
ನೀತಿವಂತರನೆ ಗುರುಗಳನೋದಿಸೆ ಹಚ್ಚಿರಿ ಶಾಲೆಯ ಬಾಲರ್ಗೆ ||
ನೀತಿಬಿಟ್ಟುಬರೆ ವೇತನಕಾಗಿಯೆ ದುಡಿವರ ದೂಡಿರಿ ಆಕ್ಷಣದಿ |
ಏತಕಾಗಿ ನೀವ್ಕೆಡಿಸುತಾಲಿರ್ಪಿರಿ ಭಾವೀಪಿಳಿಗೆಯಾ || ೧೮ ||
ನೀತಿವುಳ್ಳರನೆ ನೌಕರಿಯೊಳ್ಸರ್ಕಾರವು ಯಲ್ಲೆಡೆ ನೇಮಿಸಲೀ |
ನೀತಿಗೆಟ್ಟವಗೆ ಶಾಸನ ವಿಧಿಸಲಿ ದಂಡವನಾಚಣದಿ ||
ನೀತಿವಂತರೆ ರಾಜ್ಯವನಾಳಲು ಯೋಗ್ಯರುಯೆನಿಸುವರೂ |
ನೀತಿಪ್ರಸರಣೆಯು ಆಗಲಿಯಿಲ್ಲೆಡೆ ನಿಮ್ಮೀಜಗದೊಳಗೇ || ೧೯ ||
ಜಾತಿಯೊಂದೆಯೇ ಮಾನವ ಜಾತಿಯು ತಾನಾಗಿರೆ ಜಗದಿ |
ಜಾತಿಭೇದವದು ಪೆಂಣ್ಗಂಡೆಂಬುದು ಸೃಷ್ಟಿಯ ಕ್ರಮದಿಂದೆ ||
ಜಾತಿವಿಜಾತಿಯ ಜಗಳವಪೂಡ್ವುದು ಪಾಶವವೃತ್ತಿಯು ಕೇಳ್ |
ಜಾತ್ಯಂಧತೆಯೂ ದೂಡುತೆ ಹೊಂದಿರಿ ಶಾಶ್ವತ ಸುಖಗಳನೂ || ೨೦ ||
ಹಳ್ಳಿಯ ಜನಗಳು ಬಂಧುಗಳೆಂಬ ಭಾವನೆ ಬೆಳೆಯಿಸಿರಿ |
ವಳ್ಳೆತರಹದ ಶಿಕ್ಷಣ ಸೌಕರವೆಲ್ಲೆಡೆವೊದಗಿಸಿರಿ ||
ಮಳ್ಳುತನವ ದೂರೋಡಿಸಿ ಬೆರೆಯಿರಿ ಯೆಲ್ಲರುವೊಂದಾಗಿ |
ಜೊಳ್ಳಭಿಮಾನವ ತೊರೆಯುತೆ ಬಾಳಿರಿ ಎಲ್ಲರು ಸುಖಿಯಾಗಿ || ೨೧ ||
ತರುಣರೆಲ್ಲರೂ ಗಂಡ್ಹೆಣ್ಣೆನ್ನದೆ ಬೆಳೆಸಿರಿ ದೇಹದ ಬಲಗಳನೂ |
ಮರಣಕಂಜದಲೆ ಶಿಸ್ತನು ಕಲಿಯಿರಿ ಶೇರುತೆ ರಾಷ್ಟ್ರದ ಸೈನ್ಯದಲಿ ||
ತರುಣವೃದ್ಧರೂ ಕೂಡಿಯೆ ಹೆಣಗಿರಿ ಬೆಳೆಯಿಸೆ ರಾಷ್ಟ್ರದ ಸಂಪದವಾ |
ತರುಣತರುಣಿಯರೆ ಕೊಳ್ಳಿರಿ ಪಣವನು ನಾಡಿಗೆಯರ್ಪಿಸೆ ದೇಹಗಳಾ || ೨೨ ||
ಹೊಲೆತನನೆಂಬುದು ಬಾರದು ಜನನದಲೆಂಬುದ ನೀವ್ತಿಳಿದೂ |
ಹೊಲೆಯರೆಂದು ನೀವ್ಹಳಿಯಲು ಬೇಡಿರಿ ನಾಡಿನ ಬಂಧುಗಳಾ ||
ವೊಲಿಮೆಯಿಂದ ನೀವಪ್ಪಿರಿ ನಿಮ್ಮಯ ಪೀಡಿತ ಭಾಂಧವರಾ |
ಹೊಲೆತನ ಕೃತ್ಯವಮಾಳ್ಪರ ದೂಡಿರಿ ಬೋಧಿಸೆ ಶಾಸನ ಬಂದಿಯಲೀ || ೨೩ ||
ನಿಮ್ಮಲೋಕದೊಳು ವಾಸಿಪ ಜನಗಳು ವೊಂದೇಮನೆಯವರೂ |
ನಿಮ್ಮೊಳು ಕೆಲಬರ ಪೀಡೆಯೆ ಸರ್ವರ ನಾಶಕೆ ಕಾರಣವೂ ||
ನಿಮ್ಮ ನಿಮ್ಮಗಳ ಭೇದದ ಕಲ್ಪನೆತ್ಯಜಿಸಲು ನೀವಾಗ |
ಹೆಮ್ಮೆಯಿಂದ ನೀವ್ಮೆರೆವಿರಿ ಜಗದೊಳು ಬೊಮ್ಮನ ದಯೆದಿಂದೆ || ೨೪ ||
ನಿಮ್ಮ ಶ್ರೇಷ್ಠ ಪಥ ವೊಮ್ಮನದಿಂದಲಿ ಹರಡಿರಿ ಜಗದೊಳು ಯೆಲ್ಲೆಡೆಗೇ !
ನಿಮ್ಮ ನಿಮ್ಮಗಳ ಬೇಧವ ನಳುಕಿಸಿ ಬಾಳಿರಿ ಬೆಳಗಿರಿ ಪ್ರೇಮದಲೀ ||
ನಿಮ್ಮಲೋಕದೊಳು ಬೆಳೆಯಲು ಐಕ್ಯವು ಯೆಲ್ಲೆಡೆ ಸಿರಿಹರಿ ದಯದಿಂದೆ |
ನಮ್ಮನಿಮ್ಮಗಳ ಶಾಸ್ವತ ಮೈತ್ರಿಯು ಬೆಳೆವುದು ನಿಶ್ಚಯದಿ || ೨೫ ||
ನಮ್ಮನಿಮ್ಮಗಳ ಲೋಕಕ್ಕೊಡೆಯನು ವೊಬ್ಬನೆ ಭಗವಂತಾ |
ಭಿನ್ನಭಿನ್ನಲೋಕದೊಳಮ್ಮನು ಪುಟ್ಟಿಸಿ ಲೀಲೆಯ ಪೂಡಿಹನು ||
ನಮ್ಮನಮ್ಮಗಳ ಕಾಯಕವೆಸಗುತೆ ಮಡಿಯಲು ನಾವಂದು |
ನಿಮ್ಮ ನಾಯಕನು ಗಾಂಧಿಯು ಪೊಂದಿದ ಲೋಕಕೈದುವೆವೂ || ೨೬ ||
*****


















