ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೬೯

ತನ್ನಂತೆಯೇ ರೂಪಿಸಲು ರೊಟ್ಟಿಯನ್ನು ಬಡಿಬಡಿದು ಅದೆಷ್ಟು ಚೆಂದಗೆ ಹದಗೊಳಿಸುತ್ತದೆ ಹಸಿವು. ರೊಟ್ಟಿಯೀಗ ಹೊರನೋಟಕ್ಕೆ ಹಸಿವಿನದೇ ಪ್ರತಿಬಿಂಬ ಒಳಗು ಮಾತ್ರ ಆತ್ಮಪ್ರತ್ಯಯದಲಿ ಜ್ವಲಿಸುವ ಮೂಲ ಬಿಂಬ. *****

ದುಃಖ ಸರಿದು

ಮೋಡ ಕವಿದ ಮನಸಿಗೆಲ್ಲ ಬಿಸಿ ಉಸಿರುಗಳ ಭರ ಸಿಡಿಲು ಸಿಡಿದಾಗ ಚಿಮ್ಮಿತ್ತು ಮಳೆ ಶಾಂತವಾಗಿತ್ತು ಪ್ರಕೃತಿ ಮತ್ತೆ ಚಿಗುರೊಡದಿತ್ತು ಒಡಲು. *****

ಕರುಣೆ

ಎಲ್ಲ ಕಾಳುಗಳಲ್ಲಿ ಇರುವುದಿಲ್ಲ ಎಣ್ಣೆ ಎಲ್ಲ ಹಾಲುಗಳಲ್ಲಿ ಬರುವುದಿಲ್ಲ ಬೆಣ್ಣೆ ಹಾಗೆ ಎಲ್ಲ ನೋಟಗಳ ಹಿಂದೆ ಇರುವುದಿಲ್ಲ ಕರುಣೆ *****

ಬೆಸುಗೆ

ಅಕ್ಷರದಿ ಬರೆದ ಕಣ್ಣು ಕಣ್ಣೀರ ಸುರಸೀತೇ? ಅಕ್ಷರದಿ ಬರೆದ ಹೃದಯ ಪ್ರೀತಿ ಬೀರೀತೇ? ಭಾವ ಬೆಸುಗೆ ಇರೆ ಸುರ ಸೀತು ಕಂಬನಿ ಎದೆಯಾಳ ಪ್ರೀತಿ *****